ಪ್ರೀತಿಗೆ ಪೋಷಕರ ಅಡ್ಡಿ. ನೆಲಮಂಗಲ ನಗರ ಪೊಲೀಸರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಪ್ರೇಮಿಗಳು.
ನೆಲಮಂಗಲ(ಬೆಂಗಳೂರು ಗ್ರಾ.):ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವ ಪ್ರೇಮಿಗಳು ಪೊಲೀಸರ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು. ಇವರ ಮದುವೆಗೆ ಪೊಲೀಸರದ್ದೇ ಪೌರೋಹಿತ್ಯವಿತ್ತು. ನೆಲಮಂಗಲ ಮೂಲದ ಬಿಂದು (19) ಹಾಗೂ ಹಾವೇರಿ ಮೂಲದ ಕರುಬಸಪ್ಪ (24) ಪ್ರೀತಿಸಿ ವಿವಾಹವಾದವರು.
ಪೊಲೀಸರ ಸಮ್ಮುಖದಲ್ಲಿ ನಡುರಾತ್ರಿ ದಾಂಪತ್ಯಕ್ಕೆ ಕಾಲಿಟ್ಟ ಪ್ರೇಮಿಗಳು
ನೆಲಮಂಗಲದಲ್ಲಿ ವಾಸವಿದ್ದ ಬಿಂದು ಹಾಗೂ ಕೆ ಆರ್ ಪುರಂನಲ್ಲಿದ್ದ ಕರುಬಸಪ್ಪ ಪ್ರೀತಿಗೆ ಪೋಷಕರ ತೀವ್ರ ವಿರೋಧವಿತ್ತಂತೆ. ಹಾಗಾಗಿ ಇಬ್ಬರು ಓಡಿ ಬಂದು ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಅಳಲು ತೋಡಿಕೊಂಡಿದ್ದಾರೆ. ಜತೆಗೆ ಮದುವೆ ಮಾಡಿಸುವಂತೆಯೂ ಆರಕ್ಷಕರನ್ನು ಒತ್ತಾಯಿಸಿದ್ದಾರೆ.
ಪ್ರೇಮಿಗಳ ಅಳಲು ಕೇಳಿ ನಡುರಾತ್ರಿಯೇ ನಗರದ ಕವಾಡಿ ಮಠದ ರುದ್ರೇಶ್ವರ ದೇಗುಲದಲ್ಲಿ ಪೊಲೀಸರು ವಿವಾಹಕ್ಕೆ ಏರ್ಪಾಡು ಮಾಡಿದರು. ಇದಕ್ಕೂ ಮುನ್ನ ಯುವಕ ಮತ್ತು ಯುವತಿಯ ವೈಯಕ್ತಿಕ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು, ಇಬ್ಬರೂ ವಯಸ್ಕರಾಗಿದ್ದ ಕಾರಣ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರಂತೆ. ದೇವರು ಹಾಗೂ ಪೊಲೀಸರ ಸಮ್ಮುಖದಲ್ಲಿ ಮಾಂಗಲ್ಯ ಧಾರಣೆಯಾಗಿದೆ. ನವದಂಪತಿ ಸಿಹಿ ಹಂಚಿ, ಪೊಲೀಸರ ಆಶೀರ್ವಾದ ಪಡೆದರು

