ರೇಣುಕಾಚಾರ್ಯ ಮನೆಯಿಂದ ಕೇವಲ ನಾಲ್ಕು ಕಿಮೀ ದೂರದ ಕಡದಕಟ್ಟಿ ಬಳಿಯ ತುಂಗಾ ನಾಲೆಯಲ್ಲಿ ನ.3ರ ಸಂಜೆ ಚಂದ್ರಶೇಖರ್ ಅವರ ಕಾರಿನಲ್ಲಿ ಶವ ಸಿಕ್ಕಿತ್ತು.

ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಅವರ ಅನುಮಾನಾಸ್ಪದ ಸಾವು ಕರ್ನಾಟಕದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಸ್ವತಃ ರಾಜ್ಯದ ಮುಖ್ಯಮಂತ್ರಿಯೇ ಅವರ ಮನೆಗೆ ಬಂದು ಸಾಂತ್ವನ ಹೇಳಿದ್ದರು. ಈ ಸಾವಿಗೆ ಹಿಂದುತ್ವವಾದ ಲೇಪ, ಕೊಲೆಯ ಆಯಾಮ ನೀಡಲು ರೇಣುಕಾಚಾರ್ಯ ಕುಟುಂಬವೂ ಯತ್ನಿಸಿತ್ತು. ಇದು ಅಪಘಾತವೋ, ಕೊಲೆಯೋ ಎಂಬ ಬಗ್ಗೆ ತನಿಖೆಯು ಯಾವುದೇ ಅಂಶವನ್ನು ದೃಢಪಡಿಸಿಲ್ಲ. ಆದರೆ ಇಷ್ಟು ದಿನ ಇದೊಂದು ಕೊಲೆ ಎಂದು ಪ್ರತಿಪಾದಿಸುತ್ತಿದ್ದ, ಪೊಲೀಸರ ವಿರುದ್ಧ ಹರಿಹಾಯುತ್ತಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಈಗ ಏಕಾಏಕಿ ಮೌನಕ್ಕೆ ಶರಣಾಗಿದ್ದಾರೆ. ಈ ವಿದ್ಯಮಾನವು ಹಲವು ವಿಶ್ಲೇಷಣೆಗಳಿಗೆ ಕಾರಣವಾಗಿದೆ. ಕಳೆದ ಅ 30ರಿಂದ ಕಣ್ಣೀರು ಹಾಕುತ್ತಿದ್ದ ಶಾಸಕ ರೇಣುಕಾಚಾರ್ಯ ಎಂದಿನಂತೆ ಮತ್ತೆ ಕ್ಷೇತ್ರ ಸುತ್ತುತ್ತಿದ್ದಾರೆ.

ಚಂದ್ರಶೇಖರ್ ಶವ ಪತ್ತೆಯಾಗಿ ಇಂದಿಗೆ 12 ದಿನಗಳಾಗಿವೆ. ರೇಣುಕಾಚಾರ್ಯ ಮನೆಯಿಂದ ಕೇವಲ ನಾಲ್ಕು ಕಿಮೀ ದೂರದ ಕಡದಕಟ್ಟಿ ಬಳಿಯ ತುಂಗಾ ನಾಲೆಯಲ್ಲಿ ನ.3ರ ಸಂಜೆ ಚಂದ್ರಶೇಖರ್ ಅವರ ಕಾರಿನಲ್ಲಿ ಶವ ಸಿಕ್ಕಿತ್ತು. ‘ಇದು ರಸ್ತೆ ದುರಂತ ಅಥವಾ ಅಪಘಾತವಲ್ಲ. ನನ್ನ ಮಗನ ಕೊಲೆಯಾಗಿದೆ. ನಾನು ಹಿಜಾಬ್-ಹಲಾಲ್ ಬಗ್ಗೆ ಮಾತನಾಡುತ್ತಿದ್ದೆ. ಇದರಿಂದಾಗಿ ನನಗೆ ಹಾಗೂ ಚಂದ್ರಶೇಖರ್​ಗೆ ಬೇದರಿಕೆ ಕರೆಗಳು ಬಂದಿದ್ದವು. ಇದೊಂದು ವ್ಯವಸ್ಥಿತ ಕಿಡ್ನಾಪ್ ಹಾಗೂ ಕೊಲೆ’ ಎಂದು ರೇಣುಕಾಚಾರ್ಯ ಹಲವು ಬಾರಿ ಹೇಳಿದರು.

ಈ ಹಿಂದೆ ಗೃಹಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೇಣುಕಾಚಾರ್ಯ ಅವರ ಮನೆಗೆ ಬಂದಾಗ ಈ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೇಣುಕಾಚಾರ್ಯ ಮನೆಗೆ ಬಂದ ಸಿಎಂ ಬೊಮ್ಮಾಯಿ ಪೊಲೀಸರು ಹೇಳುವ ಮಾತುಗಳನ್ನೇ ಪುನರುಚ್ಚರಿಸಿ, ಅಲ್ಲಿಂದ ತೆರಳಿದರು. ಪೊಲೀಸರು ಹೇಳುವ ಪ್ರಕರಣ ಶವ ಐದು ದಿನ ನೀರಿನಲ್ಲಿ ಇತ್ತು. ಹೀಗಾಗಿ ವೈದ್ಯಕೀಯ ವರದಿ ನೀಡುವುದು ಕಷ್ಟವಾಗಿದೆ ಎಂಬ ಮಾತುಗಳನ್ನು ಕೆಲ ಮೂಲಗಳು ಹೇಳಿದರೆ, ಇನ್ನೂ ಕೆಲವು ಮೂಲಗಳು ಇದು ಉದ್ದೇಶಪೂರ್ವಕ ವಿಳಂಬ ಎನ್ನುತ್ತಿವೆ.

ಈ ಪ್ರಕರಣದಲ್ಲಿ 20ಕ್ಕೂ ಹೆಚ್ಚು ಅನುಮಾನಗಳಿವೆ. ಕಾರ್ ಹಿಂದಿನ ಸೀಟಿನಲ್ಲಿ ಚಂದ್ರಶೇಖರ್ ಅವರ ಶವ ಇತ್ತು. ಅವರ ಶವ ಪರೀಕ್ಷೆ ವೇಳೆ ಒಳ ಉಡುಪು ಇರಲಿಲ್ಲ. ಮರ್ಮಾಂಗಗಳು ಬಾತುಕೊಂಡಿದ್ದವು. ಸೀಟ್ ಬೆಲ್ಟ್ ಹಾಕದೇ ಏರ್​ಬ್ಯಾಗ್ ಹೇಗೆ ಓಪನ್ ಆಯಿತು. ಕಾರು ಈ ಪ್ರದೇಶದಲ್ಲಿ ಬಿದ್ದಿದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಪೊಲೀಸರಿಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಈ ಕಾರನ್ನು ಪೊಲೀಸರು ಹುಡುಕಲೂ ಇಲ್ಲ. ರೇಣುಕಾಚಾರ್ಯ ಅವರ ಬೆಂಬಲಿಗರೇ ಮೊದಲು ಕಾರ್ ಹುಡುಕಿದರು. ಪೊಲೀಸರಿಗಿಂತಲೂ ಮೊದಲೇ ರೇಣುಕಾಚಾರ್ಯ ಸ್ಥಳಕ್ಕೆ ಹೋಗಿದ್ದರು. ಹೀಗೆ ಈ ಪ್ರಕರಣವನ್ನು ಹತ್ತಾರು ಸಂಶಯಗಳು ಸುತ್ತಿಕೊಂಡಿವೆ.

ಬಹುತೇಕರು ಇದೊಂದು ರಸ್ತೆ ದುರಂತ. 100 ಕಿಲೋಮೀಟರ್ ವೇಗದಲ್ಲಿ ಬಂದಿರುವ ಕಾರು ತುಂಗಾ ಕಾಲುವೆಯ ಸೇತುವೆಗೆ ಡಿಕ್ಕಿ ಹೊಡೆದು ನೀರಿಗೆ ಬಿದ್ದಿದೆ ಎಂಬ ಮಾತುಗಳೂ ಪೊಲೀಸ್ ಮೂಲದಿಂದ ಕೇಳಿಬರುತ್ತಿವೆ. ಈ ನಡುವೆ ಚಂದ್ರಶೇಖರ್ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಅವರನ್ನು ಭೇಟಿಯಾಗಿದ್ದು, ಶಿವಮೊಗ್ಗದಲ್ಲಿ ಸ್ನೇಹಿತ್ ಕಿರಣ್ ಅವರನ್ನು ಭೇಟಿ ಮಾಡಿದ್ದು ತನಿಖೆಯನ್ನು ಇನ್ನೊಂದು ಆಯಾಮಕ್ಕೆ ಕೊಂಡೊಯ್ಯುತ್ತವೆ. ರೇಣುಕಾಚಾರ್ಯ ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗೂ ಪ್ರಕರಣದ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಹೀಗಾಗಿ ಚಂದ್ರಶೇಖರ್ ಪ್ರಕರಣದ ಬಗ್ಗೆ ಇನ್ನಷ್ಟು ದಿನಗಳ ಕಾಲ ಅಂತೆಕಂತೆಗಳು ಹರಿದಾಡಲಿವೆ.

ಇದೀಗ ಈ ಪ್ರಕರಣದ ಬಗ್ಗೆ ಇಷ್ಟು ದಿನ ಬಹಿರಂಗವಾಗಿ ಸಾಕಷ್ಟು ಹೇಳಿಕೆಗಳನ್ನು ನೀಡುತ್ತಿದ್ದ ರೇಣುಕಾಚಾರ್ಯ ಈಗ ಏಕಾಏಕಿ ಮೌನಕ್ಕೆ ಜಾರಿದ್ದು, ಎಂದಿನಂತೆ ಪ್ರತಿದಿನ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ. ಅವರ ಈ ಹಠಾತ್ ದಿವ್ಯ ಮೌನಕ್ಕೆ ಕಾರಣ ಏನೆಂಬುದು ತಿಳಿಯುತ್ತಿಲ್ಲ.