ತುಮಕೂರು, ನವೆಂಬರ್ 22: ”ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿಸಿ ಗೌರಿ ಶಂಕರ್ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ” ಎಂದು ಬಿಜೆಪಿ ಮಾಜಿ ಶಾಸಕ ಬಿ. ಸುರೇಶ್ ಗೌಡ ಆರೋಪಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರ ಗ್ರಾಮವೊಂದರಲ್ಲಿ ನಡೆದಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸುರೇಶ್ ಗೌಡ ಜೆಡಿಎಸ್‌ ಶಾಸಕನ ವಿರುದ್ಧ ಕೊಲೆ ಸಂಚು ಆರೋಪ ಮಾಡಿದ್ದು, ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದಾರೆ.

ಗೌರಿಶಂಕರ್‌ ನನ್ನನ್ನು ಕೊಲೆ ಮಾಡಿಸಲು ಸಂಚು ರೂಪಿಸಿ ಬೆಂಗಳೂರಿನ ಜೈಲಿನಲ್ಲಿ ಇರುವ ಕೈದಿಗಳಿಗೆ ಸುಫಾರಿ ಕೊಟ್ಟಿದ್ದಾರೆ ಎಂಬುದು ಸುರೇಶ್‌ ಗೌಡ ಆರೋಪವಾಗಿದೆ.

“ನಿನ್ನ ಆಟ ಎಲ್ಲಾ ನನಗೆ ಗೊತ್ತಿದೆ, ನನ್ನ ಕೊಲೆ ಮಾಡಿಸುವುದಕ್ಕೆ ಸಂಚು ರೂಪಿಸಿದ್ದೀಯಾ?. ಇದೆಲ್ಲಾ ನಡೆಯಲ್ಲ ಮಿಸ್ಟರ್ ಗೌರಿಶಂಕರ್‌, ಇದಕ್ಕೆಲ್ಲಾ ನನ್ನ ಕಾರ್ಯಕರ್ತರು ಬಿಡಲ್ಲ. ಯಾವನೋ ಹಣ ಕೊಡ್ತಾನಂತೆ, ಮತ್ತೊಬ್ಬ ಸುಪಾರಿ ಕೊಡ್ತಾನಂತೆ. ನೀವೇನೆ ಮಾಡಿದರೂ ನನ್ನ ಕೂದಲನ್ನು ಮುಟ್ಟಕ್ಕಾಗಲ್ಲ. ಈಶ್ವರನ ಮುಂದೆ ಹೇಳುತ್ತಿದ್ದೇನೆ ನನ್ನ ಒಂದು ಕೂದಲನ್ನು ಮುಟ್ಟು ನೋಡೋಣ” ಎಂದು ಸುರೇಶ್‌ ಗೌಡ ಶಾಸಕ ಗೌರಿಶಂಕರ್‌ ವಿರುದ್ಧ ಗುಡುಗಿದ್ದಾರೆ.

ಗೌರಿಶಂಕರ್ ಸ್ಪಷ್ಟನೆ

ಸುರೇಶ್‌ ಗೌಡಗೆ ಮುಂಬರುವ ಚುನಾವಣೆಯಲ್ಲಿ ಸೋಲುವ ಭೀತಿ ಎದುರಾಗಿದೆ. ಸೋಲುವ ಹತಾಶೆಯಿಂದ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಯಾವ ಸಂಸ್ಥೆಯಿಂದಾದರೂ ತನಿಖೆ ಮಾಡಿಸಲಿ. ಆದರೆ ಸುಳ್ಳು ಆರೋಪ ಮಾಡಬಾರದು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯವನ್ನು ಜನರ ಮುಂದಿಡುವಂತೆ ಜಿಲ್ಲಾ ವರಿಷ್ಠಾಧಿಕಾರಿಗೆ ಪತ್ರ ಬರೆಯುತ್ತಿದ್ದೇನೆ ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿ ಶಂಕರ್‌ ತಿಳಿಸಿದ್ದಾರೆ.

ಶಾಸಕರಿಗೆ ವಿದೇಶಿ ಪ್ರವಾಸವೆಂದರೆ ಬಹಳ ಇಷ್ಟ

ಚುನಾವಣೆಗಗೂ ತಿಂಗಳುಗಳು ಇರುವಾಗ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ರಾಜಕೀಯ , ಟೀಕೆ-ಟಿಪ್ಪಣಿಗಳು ಶುರುವಾಗಿವೆ. ಗೌರಿ ಶಂಕರ್ ವಿರುದ್ಧ ಕೊಲೆ ಸಂಚು ಆರೋಪ ಮಾಡಿರುವ ಸುರೇಶ್‌ ಗೌಡ ತುಮಕೂರಿನ ಬೆಳಗುಂಬ ಗ್ರಾಮದಲ್ಲಿನ ಸಿದ್ದರಾಮೇಶ್ವರನ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಗೌರಿ ಶಂಕರ್ ವಿರುದ್ಧ ಆರೋಗಳ ಸುರಿಮಳೆ ಸುರಿಸಿದ್ದಾರೆ.

ಗೌರಿ ಶಂಕರ್‌ ಶಾಸಕರಾಗಿ ನಾಲ್ಕು ವರ್ಷ ಕಳೆಯಿತು. ಅನುದಾನ ಇದ್ರೂ ದೇವಸ್ಥಾನದ ಕಾಮಗಾರಿ ಪೂರ್ಣ ಮಾಡುವಷ್ಟು ಸಮಯ ಅವರಿಗೆ ಇರಲಿಲ್ಲ. ಆದರೆ ವಿದೇಶಿ ಪ್ರವಾಸ ಮಾಡಲು ಮಾತ್ರ ಸಮಯ ಇದೆ. ಶಾಸಕರಾಗಿ ನಾಲ್ಕು ವರ್ಷ ಕಳೆದಿದೆ. ಥೈಲ್ಯಾಂಡ್, ದುಬೈ, ಗೋವಾ ಹಾಗೂ ಇತರೆ ವಿದೇಶಿ ಪ್ರವಾಸವನ್ನು ಎಷ್ಟು ಬಾರಿ ಮಾಡಿದ್ದಾರೆ ಎಂದು ಪಾಸ್‌ಪೋರ್ಟ್ ತೆಗೆದು ನೋಡಿದರೆ ಗೊತ್ತಾಗುತ್ತದೆ ಎಂದು ಟೀಕಿಸಿದ್ದಾರೆ.