ಸರ್ಕಾರಕ್ಕೆ ಪ್ರಸ್ತಾವನೆ
ಬೆಂಗಳೂರು,ನ.೨೩- ನಂದಿನ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ೨ ರೂ. ಏರಿಕೆ ಮಾಡುವ ತೀರ್ಮಾನವನ್ನು ಕರ್ನಾಟಕ ಹಾಲು ಮಹಾಮಂಡಳಿ ಮಾಡಿದ್ದು, ದರ ಏರಿಕೆಯ ಹೊಸ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಿದ್ದು, ಸರ್ಕಾರ ಒಪ್ಪಿಗೆ ನೀಡಿದ ನಂತರ ಪರಿಷ್ಕೃತ ಹಾಲಿನ ದರ ಜಾರಿಯಾಗಲಿದೆ.
ಕೆಎಂಎಫ್ ನವೆಂಬರ್ ೧೪ ರಂದು ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರವನ್ನು ೩ ರೂ. ಏರಿಕೆ ಮಾಡಿದೆ. ಆದರೆ, ಈ ಏರಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಪ್ಪದ ಕಾರಣ ಪರಿಷ್ಕೃತ ದರ ಜಾರಿಯಾಗಿರಲಿಲ್ಲ.
ನ. ೨೧ ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಜತೆ ಚರ್ಚೆ ನಡೆಸಿ ಪ್ರತಿ ಲೀ. ಹಾಲು ಮತ್ತು ಮೊಸರಿನ ದರವನ್ನು ೩ ರೂ. ಏರಿಕೆ ಮಾಡುವುದು ಬೇಡ. ಗ್ರಾಹಕರಿಗೆ ಹಾಗೂ ಹಾಲು ಉತ್ಪಾದಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ದರ ಏರಿಕೆ ಬಗ್ಗೆ ಎಲ್ಲ ಹಾಲು ಒಕ್ಕೂಟಗಳ ಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ ಮಾಡುವಂತೆ ಸೂಚಿಸಿದ್ದರು. ಅದರಂತೆ ಇಂದು ಕೆಎಂಎಫ್ ಅಧ್ಯಕ್ಷ ಜಾರಕಿಹೊಳಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ ಸಭೆ ನಡೆದಿದ್ದು, ಈ ಸಭೆಯಲ್ಲಿ ಪ್ರತಿ ಲೀಟರ್ ಹಾಲು ಮತ್ತು ಮೊಸರಿನ ದರವನ್ನು ೨ ರೂ.ಗೆ ಏರಿಸುವ ತೀರ್ಮಾನ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.ಹಾಲಿನ ದರ ಏರಿಕೆ ಬಗ್ಗೆ ಕೆಎಂಎಫ್ ಹೊಸ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಿದ್ದು, ಮುಖ್ಯಮಂತ್ರಿಗಳ ಒಪ್ಪಿಗೆ ನಂತರ ಹಾಲಿನ ಪರಿಷ್ಕೃತ ದರ ಜಾರಿಯಾಗಲಿದ್ದು, ನಾಳೆ ಇಲ್ಲವೇ ನಾಡಿದ್ದಿನಿಂದಲೇ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಶ್ರೀಸಾಮಾನ್ಯನಿಗೆ ಹಾಲಿನ ದರ ಏರಿಕೆಯು ಬರೆ ಬೀಳಲಿದೆ.
ಪ್ರತಿ ಲೀಟರ್ ಹಾಲಿಗೆ ೨ ರೂ. ದರ ಏರಿಕೆಯಾದರೆ ನಂದಿನಿ ಸಾಮಾನ್ಯ ಹಾಲಿನ (ನೀಲಿ ಪ್ಯಾಕೆಟ್) ಬೆಲೆ ಲೀಟರ್‌ಗೆ ೩೭ ರೂ.ನಿಂದ ೩೯ ರೂ. ಆಗಲಿದೆ.
ಇದೇ ವೇಳೆ ಸ್ಪೆಷಲ್ ಹಾಲಿನ ದರ ಪ್ರತಿ ಲೀಟರ್‌ಗೆ ೪೩ ರೂ.ನಿಂದ ೪೫ ರೂ.ಗೆ ಹಾಗೂ ಸಮೃದ್ಧಿ ಹಾಲಿನದರ ಪ್ರತಿ ಲೀಟರ್‌ಗೆ ೪೮ ರೂ. ನಿಂದ ೫೦ ರೂ.ಗೆ ಹೆಚ್ಚಿಸಲಾಗಿದೆ.
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ.
ಪ್ರತಿ ಲೀಟರ್ ಹಾಲು ೨ ರೂ.ಗೆ ಹೆಚ್ಚಳ.
ಪ್ರತಿ ಲೀಟರ್ ಮೊಸರಿನ ದರ ೨ ರೂ. ಏರಿಕೆ
ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಸಭೆ.
ಎರಡು ದಿನದಲ್ಲಿ ಪರಿಷ್ಕೃತ ದರ ಜಾರಿ.
ಈ ಹಿಂದೆ ದರ ಏರಿಕೆ ಪ್ರಸ್ತಾಪ ತಡೆಹಿಡಿದಿದ್ದ ಸಿಎಂ

