ತುಮಕೂರು: ಕಾಂಗ್ರೆಸ್ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನಾಗಿ ಚಂದ್ರಶೇಖರ ಗೌಡ ಅವರನ್ನು ಗುರುವಾರ ನೇಮಕ ಮಾಡಲಾಗಿದೆ.

ಆರು ವರ್ಷಗಳ ಕಾಲ ಪರಿಶಿಷ್ಟ ಜಾತಿಯ ಆರ್.ರಾಮಕೃಷ್ಣ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಈಗ ಹಿಂದುಳಿದ ಕಾಡುಗೊಲ್ಲ ಸಮುದಾಯಕ್ಕೆ ಅವಕಾಶ ಕಲ್ಪಿಸಲಾಗಿದೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಅಧ್ಯಕ್ಷರನ್ನು ಬದಲಾವಣೆ ಮಾಡುವ ಮೂಲಕ ಪಕ್ಷ ಸಂಘಟನೆಗೆ ವರಿಷ್ಠರು ಒತ್ತು ನೀಡಿದ್ದಾರೆ.

ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಘಟಕ (ಒಬಿಸಿ) ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಸೆನೆಟ್ ಸದಸ್ಯ, ಕೆಎಂಎಫ್ ನಿರ್ದೇಶಕ, ಮಧುಗಿರಿ ತಾಲ್ಲೂಕು ಭೂ ಮಂಜೂರಾತಿ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ

ಕರ್ನಾಟಕದ 5 ಜಿಲ್ಲೆಗೆ ಹೊಸ ಕಾಂಗ್ರೆಸ್ ಅಧ್ಯಕ್ಷರ ನೇಮಕ

 ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಐದು ಜಿಲ್ಲೆಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೂ ಮುಂಚಿತವಾಗಿ ಈ ಬದಲಾವಣೆ ಮಾಡಲಾಗಿದೆ.

ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಐದು ಜಿಲ್ಲೆಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಮುಂದಿನ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‌ಗೆ ಪೈಪೋಟಿ ನಡೆಯುತ್ತಿರುವಾಗಲೇ ಅಧ್ಯಕ್ಷರ ಬದಲಾವಣೆಯಾಗಿದೆ.

ಬೆಂಗಳೂರು ಗ್ರಾಮಾಂತರದ ಅಧ್ಯಕ್ಷರಾಗಿ ಸಿ. ಆರ್. ಗೌಡ, ತುಮಕೂರು ಅಧ್ಯಕ್ಷರಾಗಿ ಚಂದ್ರಶೇಖರ ಗೌಡ, ಹಾಸನಕ್ಕೆ ಇ. ಹೆಚ್. ಲಕ್ಷ್ಮಣ, ಯಾದಗಿರಿ ಅಧ್ಯಕ್ಷರಾಗಿ ಬಸರೆಡ್ಡಿ ಮತ್ತು ಕೊಡಗು ಅಧ್ಯಕ್ಷರಾಗಿ ಧರ್ಮಜ ಉತ್ತಪ್ಪ ನೇಮಕಗೊಂಡಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರ ಹಿಡಿಯುವ ಉತ್ಸಾಹದಲ್ಲಿರುವ ಕಾಂಗ್ರೆಸ್ ಪಕ್ಷ ಸಂಘಟನೆಗೆ ಆದ್ಯತೆ ನೀಡಿದೆ. ಈಗ ಪಕ್ಷ ಸಂಘಟನೆಗೆ ಅನುಕೂಲವಾಗುವಂತೆ ಅಧ್ಯಕ್ಷರ ಬದಲಾವಣೆಯಾಗಿದೆ.

ಕರ್ನಾಟಕ ಕಾಂಗ್ರೆಸ್ 2023ರ ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ಟಿಕೆಟ್‌ಗಾಗಿ 1,200ಕ್ಕೂ ಅಧಿಕ ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿಯ ಜೊತೆ 5 ಸಾವಿರ ರೂ. ಅರ್ಜಿ ಶುಲ್ಕ ಮತ್ತು ಪಕ್ಷದ ನಿಧಿಗೆ 2 ಲಕ್ಷ ರೂ. ಸಲ್ಲಿಕೆ ಮಾಡಬೇಕಿತ್ತು.

ಹಲವಾರು ಕ್ಷೇತ್ರಗಳ ಟಿಕೆಟ್‌ಗೆ ಪೈಪೋಟಿ ನಡೆದಿದೆ. ಒಂದೇ ಕ್ಷೇತ್ರಕ್ಕೆ 5-6 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಹಾಲಿ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರ ಟಿಕೆಟ್‌ಗಾಗಿಯೂ ಅರ್ಜಿ ಸಲ್ಲಿಕೆಯಾಗಿದ್ದು, ಯಾರಿಗೆ ಟಿಕೆಟ್ ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಎಐಸಿಸಿ ಅಧ್ಯಕ್ಷರಾಗಿ ಕರ್ನಾಟಕ ಮೂಲದ ಮಲ್ಲಿಕಾರ್ಜುನ ಖರ್ಗೆ ನೇಮಕವಾದ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿನ ಉತ್ಸಾಹ ಇಮ್ಮಡಿಯಾಗಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದ್ದು, ಅದನ್ನು ಬಳಕೆ ಮಾಡಿಕೊಂಡು ಮುಂದಿನ ಚುನಾವಣೆ ಗೆಲ್ಲಬೇಕು ಎಂದು ಕಾಂಗ್ರೆಸ್ ನಾಯಕರು ತಂತ್ರ ರೂಪಿಸಿದ್ದಾರೆ.