ಬೆಂಗಳೂರು,ಡಿ.10- (ಕನ್ನಡ ಇ ನ್ಯೂಸ್ )ಗುಜರಾತ್ ಚುನಾವಣೆ ನಂತರ ಕರ್ನಾಟಕ ಚುನಾವಣೆಯತ್ತ ಬಿಜೆಪಿ ವರಿಷ್ಠರು ಚಿತ್ತ ಹರಿಸಿದ್ದು, ಈ ತಿಂಗಳು ಹಾಗೂ ಮುಂದಿನ ತಿಂಗಳು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಆದಿತ್ಯನಾಥ್ ಸೇರಿದಂತೆ ಪಕ್ಷದ ಕೇಂದ್ರ ನಾಯಕರುಗಳು ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿಯ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ.
ಪ್ರಧಾನಿ ಮೋದಿ ಅವರು ಜನವರಿ 2ನೇ ವಾರ ರಾಜ್ಯಕ್ಕೆ ಬರಲಿದ್ದು, ಬೆಳಗಾವಿಯಲ್ಲಿ ನಡೆಯುವ ರೈತ ಮೋರ್ಚಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಹಾಗೆಯೇ ಕೇಂದ್ರ ಸಚಿವ ಅಮಿತ್ ಶಾ ಅವರು ಚಿತ್ರದುರ್ಗದಲ್ಲಿ ಜನವರಿ ಮೊದಲ ವಾರ ನಡೆಯುವ ಎಸ್ಸಿ ಮೋರ್ಚಾ ಸಮಾವೇಶದಲ್ಲಿ ಭಾಗಿಯಾಗುವರು.
ಬಿಜೆಪಿ ಕಚೇರಿಯಲ್ಲಿಂದು ಪಕ್ಷದ ವಿವಿಧ ಸಮಾವೇಶಗಳ ಬಗ್ಗೆ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಯೋಜಕ ಭಾನುಪ್ರಕಾಶ್ ಹಾಗೂ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಜನವರಿ 12 ರಂದು ಉಡುಪಿಯಲ್ಲಿ ಬಿಜೆಪಿ ಯುವ ಮೋರ್ಚಾ ಸಮಾವೇಶ ನಡೆಯಲಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿಆದಿತ್ಯನಾಥ್ ಭಾಗಿಯಾಗುವರು ಎಂದರು.
ಡಿಸೆಂಬರ್ 15 ರಂದು ಬಾಗಲಕೋಟೆಯ ಜಿಲ್ಲಾ ಕಚೇರಿ ಉದ್ಘಾಟನೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆಗಮಿಸಲಿದ್ದಾರೆ. ಹಾಗೆಯೇ, ಡಿ. 18 ರಂದು ಬೆಂಗಳೂರಿನಲ್ಲಿ ವಿವಿಧ ಪ್ರಕೋಷ್ಠ ಸಮಾವೇಶ ನಡೆಯಲಿದ್ದು, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪಾಲ್ಗೊಳ್ಳುವರು ಎಂದರು.
ಈ ತಿಂಗಳ 21ಮತ್ತು 22 ರಂದು ಮುರುಡೇಶ್ವರದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಲಿದೆ ಎಂದರು

ವರದಿ: ಕಾವ್ಯ, ಬೆಂಗಳೂರು ವರದಿಗಾರ್ತಿ