ಬೆಂಗಳೂರು,ಡಿ.10- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಕಣಕ್ಕಿಳಿಯಲು ಮುಂದಾಗಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತಮ್ಮ ನಿರ್ಧಾರ ಬದಲಿಸಲಿದ್ದು, ಅವರು ಮೈಸೂರಿನ ವರುಣಾದಿಂದಲೇ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ನಿಶ್ಚಿತ.ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿದ್ದ ಸಿದ್ದರಾಮಯ್ಯರವರು, ಕೆಲ ದಿನಗಳ ಹಿಂದೆ ಕೋಲಾರ ಕ್ಷೇತ್ರದ ಪ್ರವಾಸ ಕೈಗೊಂಡು ಅಲ್ಲಿಂದಲೇ ಸ್ಪರ್ಧಿಸುವ ಇಂಗಿತ ನೀಡಿದ್ದರು.
ಕೋಲಾರದಲ್ಲಿ ಮಾಜಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಹಾಗೂ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪರವರ ಒಳಜಗಳ, ಬಣ ರಾಜಕೀಯ ಸಿದ್ದರಾಮಯ್ಯರವರಿಗೆ ತಲೆನೋವು ತಂದಿತ್ತಲ್ಲದೆ ಈ ಬಣ ರಾಜಕೀಯದಿಂದ ಸೋಲಾದರೆ ಎಂಬ ಭೀತಿಯಿಂದ ಕೋಲಾರ ಬಿಟ್ಟು ವರುಣಾದತ್ತ ಮುಖ ಮಾಡಿದ್ದಾರೆ.ಸಿದ್ದರಾಮಯ್ಯರವರು ಕಳದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರವನ್ನು ತಮ್ಮ ಪುತ್ರನಿಗೆ ಬಿಟ್ಟುಕೊಟ್ಟು ಮೈಸೂರಿನ ಚಾಮುಂಡೇಶ್ವರಿ ಹಾಗೂ ಬಾಗಲಕೋಟೆಯ ಬಾದಾಮಿ ಈ ಎರಡೂ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದರು. ಚಾಮುಂಡೇಶ್ವರಿಯಲ್ಲಿ ಸೋಲು ಕಂಡ ಸಿದ್ದರಾಮಯ್ಯ, ಬಾದಾಮಿಯಲ್ಲಿ ಅತೀ ಕಡಿಮೆ ಅಂತರದಿಂದ ಗೆದ್ದಿದ್ದರು. ಈಗ ಬಾದಾಮಿ, ಕೋಲಾರ ಎಲ್ಲವನ್ನೂ ಬಿಟ್ಟು ತಮ್ಮ ಹಳೆಯ ಕ್ಷೇತ್ರವಾದ ವರುಣಾದಿಂದ ಸ್ಪರ್ಧಿಸುವ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.ವರುಣಾದಿಂದಲೇ ಸ್ಪರ್ಧಿಸಲು ತೀರ್ಮಾನಿಸಿರುವ ಸಿದ್ದರಾಮಯ್ಯ, ಕಳೆದ ಎರಡು ದಿನಗಳಿಂದ ವರುಣಾದಲ್ಲಿ ತಮ್ಮ ಪುತ್ರ ಹಾಗೂ ಶಾಸಕ ಯತೀಂದ್ರ ಜತೆ ಇಡೀ ಕ್ಷೇತ್ರದಲ್ಲಿ ಸಂಚರಿಸಿ ಮತದಾರರನ್ನು ಭೇಟಿ ಮಾಡುತ್ತಿದ್ದಾರೆ.
ತಮಗೆ ಗೊತ್ತಿರುವ ಜನರ ನಡುವೆ ಕಣಕ್ಕಿಳಿಯುವುದೇ ಸುರಕ್ಷಿತ ಎನ್ನುವ ಕಾರಣಕ್ಕಾಗಿ ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧಿಸುವ ಮನಸ್ಸು ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.

