ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. 40 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಹಿಮಾಚಲ ಪ್ರದೇಶದಲ್ಲಿ ಭಾನುವಾರ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಸುಖ್ವಿಂದರ್ ಸಿಂಗ್ ಸುಖು ಬೆಳಗ್ಗೆ 11 ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಶನಿವಾರ ಕಾಂಗ್ರೆಸ್ ಸುಖ್ವಿಂದರ್ ಸಿಂಗ್ ಸುಖು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಈ ಹಿಂದೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಮುಕೇಶ್ ಅಗ್ನಿಹೋತ್ರಿ ಉಪಮುಖ್ಯಮಂತ್ರಿಯಾಗಲಿದ್ದಾರೆ.

ಹಿಮಾಚಲ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ, ನಾಲ್ಕು ಬಾರಿ ಶಾಸಕರಾಗಿರುವ ಸುಖ್ವಿಂದರ್ ಸಿಂಗ್ ಸುಖು ಹಿಮಾಚಲ ಪ್ರದೇಶವನ್ನು ಮುನ್ನಡೆಸಲಿದ್ದಾರೆ. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಸ್ಪಷ್ಟ ಬಹುಮತ ಪಡೆದಿದೆ.

ಶನಿವಾರ ಮುಖ್ಯಮಂತ್ರಿಯಾಗಿ ಸುಖ್ವಿಂದರ್ ಸಿಂಗ್ ಸುಖು ನೇಮಕ ಮಾಡಿರುವ ಬಗ್ಗೆ ಪಕ್ಷದ ಹಿರಿಯ ನಾಯಕ ಆನಂದ್ ಶರ್ಮಾ ಟ್ವೀಟ್ ಮಾಡಿದ್ದರು. ‘ನಮ್ಮ ನಾಯಕತ್ವಕ್ಕೆ ಧನ್ಯವಾದಗಳು, ಸಾಮಾನ್ಯ ಕುಟುಂಬದ ಮಗ ನಮ್ಮ ಮುಖ್ಯಮಂತ್ರಿಯಾಗುವುದು ಹೆಮ್ಮೆಯ ವಿಷಯ’ ಎಂದು ಹೇಳಿದ್ದರು.

ನೂತನ ಸಿಎಂ ಪರಿಚಯ; 58 ವರ್ಷದ ಸುಖ್ವಿಂದರ್ ಸಿಂಗ್ ಸುಖು ಹಮೀರ್‌ಪುರ ಜಿಲ್ಲೆಯ ನಿವಾಸಿ. ಬಸ್ ಚಾಲಕನ ಪುತ್ರ, ಹಿಂದೆ ಶಿಮ್ಲಾದಲ್ಲಿ ಹಾಲು ಮಾರಾಟ ಮಾಡುತ್ತಿದ್ದರು. ಶಿಮ್ಲಾದ ಸಂಜೌಲಿಯ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ವಿದ್ಯಾರ್ಥಿ ನಾಯಕರಾಗಿ ಆಯ್ಕೆಯಾಗಿದ್ದರು.

ಮುಖ್ಯಮಂತ್ರಿ ಹುದ್ದೆಗೆ ರಾಜ್ಯಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಅವರ ಹೆಸರು ಸಹ ಕೇಳಿ ಬರುತ್ತಿತ್ತು. ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ವೀರಭದ್ರ ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್ ಸಹ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರು ಸುಖ್ವಿಂದರ್ ಸಿಂಗ್ ಸುಖು ಸಂಪುಟದಲ್ಲಿ ಪ್ರಭಾವಿ ಖಾತೆ ಪಡೆಯುವ ನಿರೀಕ್ಷೆ ಇದೆ.

ಸುಖ್ವಿಂದರ್ ಸಿಂಗ್ ಸುಖು ಪ್ರಮಾಣ ಪಚನ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಹೈಕಮಾಂಡ್‌ನ ವಿವಿಧ ನಾಯಕರು ಆಗಮಿಸುವ ನಿರೀಕ್ಷೆ ಇದೆ.

2017ರ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ರಾಜ್ಯದಲ್ಲಿ ಅಧಿಕಾರ ನಡೆಸುವ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲಿದೆ ಎಂಬುದು ಮತ್ತೆ ರಾಜ್ಯದಲ್ಲಿ ಸಾಬೀತಾಗಿದೆ.

ಈ ಬಾರಿಯ ಚುನಾವಣೆಯಲ್ಲಿಯೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಮರಳುವ ನಿರೀಕ್ಷೆಯಲ್ಲಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸುವಾಗ, “ಪ್ರಜಾಪ್ರಭುತ್ವದಲ್ಲಿ ರಾಜ-ರಾಣಿಯರಿಗೆ ಸ್ಥಾನವಿಲ್ಲ. ಪ್ರಜಾಪ್ರಭುತ್ವದಲ್ಲಿ ನೀವು ಜನರಿಗಾಗಿ ಕೆಲಸ ಮಾಡಬೇಕಾಗಿದೆ” ಎಂದು ಮಾಜಿ ಮುಖ್ಯಮಂತ್ರಿ ದಿ. ವೀರಭದ್ರ ಸಿಂಗ್ ಕುಟುಂಬದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.

“ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬಹುಮತ ಬರುವುದಿಲ್ಲ” ಎಂದು ಚುನಾವಣಾ ಪ್ರಚಾರದಲ್ಲಿ ಅಮಿತ್ ಶಾ ಹೇಳಿದ್ದರು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಾ ಲೆಕ್ಕಾಚಾರ ಬುಡಮೇಲು ಮಾಡಿತ್ತು.

68 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 40 ಸ್ಥಾನ, ಬಿಜೆಪಿ 25 ಸ್ಥಾನ ಮತ್ತು ಇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದರು. ಈ ಮೂಲಕ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ 2ನೇ ಸ್ಥಾನಕ್ಕೆ ಕುಸಿದಿತ್ತು.

ಭಾನುವಾರ ಸುಖ್ವಿಂದರ್ ಸಿಂಗ್ ಸುಖು, ಮುಕೇಶ್ ಅಗ್ನಿಹೋತ್ರಿ ಮಾತ್ರ ಪ್ರಮಾಣ ವಚನ ಸ್ವೀಕಾರ ಮಾಡುವ ನಿರೀಕ್ಷೆ ಇದೆ. ಬಳಿಕ ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ