ಮ್ಯಾಂಡಸ್ ಚಂಡಮಾರುತದ ಎಫೆಕ್ಟ್ ಪರಿಣಾಮ ಕರ್ನಾಟಕದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮಳೆ ಪರಿಣಾಮ ಹಲವು ಅಡಚಣೆಗಳು ಉಂಟಾಗಿದ್ದು, ಸಂಜೆಯಾಗುತ್ತಿದ್ದಂತೆ ಜನರು ಮನೆ ಸೇರಿಕೊಳ್ಳುತ್ತಿದ್ದಾರೆ.

ಇದೀಗ ಜೆಡಿಎಸ್ ಪಂಚರತ್ನ ರಥಯಾತ್ರೆಗೂ ಚಂಡಮಾರುತ ಎಫೆಕ್ಟ್ ತಟ್ಟಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಭಾರೀ ಮಳೆಯಾಗ್ತಿದೆ.

ತುಮಕೂರು ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವುದರಿಂದ ಚಿಕ್ಕನಾಯಕನಹಳ್ಳಿಯಿಂದ ಮತ್ತೆ ಶುರುವಾಗಬೇಕಿದ್ದ ಪಂಚರತ್ನ ರಥಯಾತ್ರೆ 4 ದಿನಗಳ ಕಾಲ ಮುಂದೂಡಿಕೆ ಮಾಡಲಾಗಿದೆ ಅಂತ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಡಿಸೆಂಬರ್ 15ರಂದು ಮಾಗಡಿಯಲ್ಲಿ ರಥಯಾತ್ರೆ ನಡೆಯಲಿದ್ದು, ಡಿಸೆಂಬರ್ 27ರಂದು ಮತ್ತೆ ತುಮಕೂರು ಜಿಲ್ಲೆಗೆ ರಥಯಾತ್ರೆ ಪ್ರವೇಶ ಮಾಡಲಿದೆ ಅಂತ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲರೂ ಸಹಕಾರ ನೀಡಬೇಕು ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿಕೊಂಡಿದ್ದಾರೆ.

ಡಿಸೆಂಬರ್ 15ರಂದು ಮಾಗಡಿ, ಡಿ.16ಕ್ಕೆ ರಾಮನಗರ, ಡಿ.17 ಹಾರೋಹಳ್ಳಿ, ಡಿ.18 ಕನಕಪುರ, ಡಿ.19 ಚನ್ನಪಟ್ಟಣ, ಡಿ.20 ಮಳವಳ್ಳಿ, ಡಿ.21 ಮದ್ದೂರು, ಡಿ.22 ಕೆ.ಆರ್.ಪೇಟೆ, ಡಿ.23 ಶ್ರೀರಂಗಪಟ್ಟಣ, ಡಿ.24 ಪಾಂಡವಪುರ, ಡಿ.25 ಕೆ.ಆರ್ ಪೇಟೆ, ಡಿ.26ರಂದು ನಾಗಮಂಗಲ ತಲುಪಲಿದೆ.

ಡಿಸೆಂಬರ್ 27ರಂದು ತುರುವೇಕರೆ, ಡಿಸೆಂಬರ್ 28ಕ್ಕೆ ಚಿಕ್ಕನಾಯಕನಹಳ್ಳಿ, ಡಿಸೆಂಬರ್ 29ರಂದು ತುಮಕೂರು ಗ್ರಾಮಾಂತರ, 30ರಂದು ಕುಣಿಗಲ್ ಕ್ಷೇತ್ರದಲ್ಲಿ ಜೆಡಿಎಸ್ ರಥಯಾತ್ರೆ ಮುಂದುವರಿಯಲಿದೆ.

ನಾಲ್ಕು ದಿನಗಳ ಕಾಲ ತುಮಕೂರು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಜೆಡಿಎಸ್ ಪಂಚರತ್ನ ಯಾತ್ರೆ ತಲುಪಲಿದೆ.
