ಹಾಸನ – ಹಾಸನ ಜಿಲ್ಲೆಯಾದ್ಯಂತ ಮೂರ್ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಲೆನಾಡಿನ ಜನರಲ್ಲಿ ಆತಂಕ ಉಂಟಾಗಿದೆ. ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅದರಲ್ಲೂ ಬೇಲೂರು, ಸಕಲೇಶಪುರ, ಆಲೂರು, ಅರಕಲಗೂಡು ತಾಲೂಕುಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರೈತರು ಕಂಗಾಲಾಗಿದ್ದಾರೆ. ಅಲ್ಪ ಸ್ವಲ್ಪ ತೋಟ ಅಥವಾ ಗದ್ದೆ ಇರುವವರ ಗೋಳೋ ಗೋಳು ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಅಯ್ತಾಲ್ಲ ಎಂದು, ಕಾಫಿ ಮತ್ತು ಭತ್ತದ ಬೆಳೆ ಕೂಯ್ಯಿಲಿಗೆ ಬಂದಿದ್ದು, ಯಾವುದೇ ಬೆಳೆ ಸಿಗುವ ಸಾಧ್ಯತೆ ಕಂಡು ಬರದಿದ್ದರೆ ಮುಂದೆ ಏನು ಮಾಡುವುದು ಎಂದು ಅಳಲನ್ನು ತೋಡಿಕೊಂಡಿದ್ದಾರೆ.

ಮಳೆ ಮತ್ತು ಗಾಳಿ ವಿಪರಿತವಾಗಿದ್ದು, ತಂಡಿ ಗಾಳಿಯಿಂದ ಜನರ ಆರೋಗ್ಯ ಅಸ್ತವ್ಯಸ್ತವಾಗಿದ್ದು, ಶೀತ, ಚಳಿ, ಜ್ವರ ಕಂಡುಬರುತ್ತಿರುವುದರ ಪರಿಣಾಮ ಆಸ್ಪತ್ರೆಗಳಲ್ಲಿ ಜನವೋ ಜನ. ಚಳಿಯ ವಾತಾವರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಾರ್ವಜನಿಕರ ಅನುಕೂಲಕ್ಕಾಗಿ ಮಾರ್ಗ ಸೂಚಿ ಸಿದ್ದಪಡಿಸಿದೆ. ಸುಲಭವಾಗಿ ಜೀರ್ಣವಾಗುವ ಬಿಸಿ ಬಿಸಿ ಆಹಾರ, ಬಿಸಿ ನೀರು ಸೇವಿಸಬೇಕು. ಸ್ವೆಟರ್, ಟೋಪಿ, ಸಾಕ್ಸ್ ಧರಿಸಿಕೊಳ್ಳುವುದು ಉತ್ತಮ ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.