ತುಮಕೂರು:  ಜಿಲ್ಲೆಯಲ್ಲಿ ಪ್ರತಿ 30,000 ದಿಂದ 60,000 ಜನಸಂಖ್ಯೆಗೆ ಒಂದರಂತೆ 10 ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗು ತ್ತಿದೆ. ಮರಳೂರು ದಿಣ್ಣೆ, ಮೇಳೆಕೋಟೆ, ಜಯಪುರ ಅಂಗನವಾಡಿ, ದೇವರಾಯ ಪಟ್ಟಣದ ಸಮುದಾಯ ಭವನ, ದಿಬ್ಬೂರು ಅಂಗನವಾಡಿ, ಸತ್ಯಮಂಗಲ ಸಮುದಾಯ ಭವನ, ಕೆ.ಆರ್. ಬಡಾವಣೆ ಸೇರಿದಂತೆ ನಗರ ಪ್ರದೇಶದಲ್ಲಿ 7 ಹಾಗೂ ಮಧುಗಿರಿ, ಪಾವಗಡ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ತಲಾ 1 ನಮ್ಮ ಕ್ಲಿನಿಕ್‌ಗಳನ್ನು ತೆರೆಯ ಲಾಗುತ್ತಿದೆ.

ತುಮಕೂರು ನಗರದ ಮರಳೂರು ದಿಣ್ಣೆ, ಮೆಳೇಕೋಟೆ ಹಾಗೂ ಮಧುಗಿರಿ, ಪಾವಗಡ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸ್ಥಾಪಿಸಿರುವ ನಮ್ಮ ಕ್ಲಿನಿಕ್‌ಗಳನ್ನು ಡಿ.14ರಂದು ಮುಖ್ಯಮಂತ್ರಿಗಳು ವರ್ಚ್ಯುಯಲ್ ಮೋಡ್ ಮೂಲಕ ಉದ್ಘಾಟಿಸಲಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ.

ಆರೋಗ್ಯ ಸೇವೆಗಳು ಅತ್ಯಾವಶ್ಯವಿರುವ ಜನಸಂಖ್ಯೆಯ ಮೌಲ್ಯಮಾಪನ ಮತ್ತು ನಗರ ಪ್ರದೇಶಗಳ ಮ್ಯಾಪಿಂಗ್ ಆಧಾರದ ಮೇಲೆ ಪ್ರಸ್ತುತ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೌಲಭ್ಯಗಳಿಲ್ಲದ ಕೊಳೆಗೇರಿ/ ದುರ್ಬಲ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್ ತೆರೆಯಲು ಆದ್ಯತೆ ನೀಡಲಾಗುವುದು.

ನಮ್ಮ ಕ್ಲಿನಿಕ್ ಯೋಜನೆಯಡಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ವಿಶ್ವದರ್ಜೆಯ ಉಚಿತ ಚಿಕಿತ್ಸೆ, ಕಾಳಜಿಯುತ ಆರೋಗ್ಯ ಸೇವೆ ಹಾಗೂ ನಿರಂತರ ಆರೋಗ್ಯ ಪಾಲನೆಯನ್ನು ಖಾತ್ರಿಪಡಿಸುವ ಮತ್ತು ಕೆಳಹಂತ ದಿಂದ ಮೇಲಿನ ಹಂತದ ಸೇವೆಗಳನ್ನು ನೀಡುವ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳ ಸಂಪರ್ಕ ಕಲ್ಪಿಸುವ ಉದ್ದೇಶವನ್ನು ಹೊಂದ ಲಾಗಿದೆ.

ಆರೋಗ್ಯ ಸೇವೆಗಳಿಗಾಗಿ ಸಾರ್ವಜನಿಕರು ತಮ್ಮ ಸ್ವಂತ ಹಣದ ಖರ್ಚನ್ನು ಕಡಿಮೆ ಮಾಡುವ, ದ್ವಿತೀಯ ಹಾಗೂ ತೃತೀಯ ಹಂತದ ಆರೋಗ್ಯ ಸಂಸ್ಥೆಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡುವ ಉದ್ದೇಶವನ್ನು ನಮ್ಮ ಕ್ಲಿನಿಕ್ ಯೋಜನೆ ಹೊಂದಿದೆ ಯಲ್ಲದೆ ಯೋಗ ಮತ್ತು ಆರೋಗ್ಯ ಸಂಬಂಧಿತ ಮಾಹಿತಿ ಲಭ್ಯವಿರುತ್ತದೆ.

ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ವಿಕೇಂದ್ರೀಕರಿಸುವ ಜೊತೆಗೆ ಸಾಂಕ್ರಾಮಿಕ ರೋಗಗಳ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುತ್ತಾ, ಸಾಂಕ್ರಾಮಿಕ ರೋಗ ಉಲ್ಬಣ ಪರಿಸ್ಥಿತಿಯನ್ನು ತ್ವರಿತಗತಿಯಲ್ಲಿ ದಾಖಲಿಸುವ ವ್ಯವಸ್ಥೆ ಯನ್ನು ಚಾಲನೆಗೊಳಿಸುವ ಮಹದಾಶೆಯನ್ನು ಕೂಡ ನಮ್ಮ ಕ್ಲಿನಿಕ್ ಹೊಂದಿದೆ. ಇದರಿಂದ ಆರೋಗ್ಯ ಸಂವರ್ಧನೆ ಹಾಗೂ ಕ್ಷೇಮ ಚಟುವಟಿಕೆಗಳ ಮೂಲಕ ಗಂಡಾಂತರ ಪರಿಸ್ಥಿತಿಗಳನ್ನು ನಿವಾರಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ ತಿಳಿಸಿದ್ದಾರೆ