ತುಮಕೂರು: ನಗರದಲ್ಲಿ 7 ನಮ್ಮ ಕ್ಲಿನಿಕ್ ಸೆಂಟರ್‌ಗಳು ಬುಧವಾರ ಉದ್ಘಾಟನೆಗೊಂಡವು.
ಮೆಳೆಕೋಟೆ ಸೆಂಟರ್ ಉದ್ಘಾಟಿಸಿ ಮಾತನಾಡಿದ ಶಾಸಕ ಜಿ.ಬಿ.ಜೋತಿಗಣೇಶ್, ಸರಕಾರ ಸುಮಾರು 430 ನಮ್ಮ ಕ್ಲಿನಿಕ್‌ಗಳನ್ನು ಬಡವರು, ಕೂಲಿ ಕಾರ್ಮಿಕರು, ದಲಿತರು, ಹಿಂದು ಳಿದ ವರ್ಗಗಳ ಜನರು ವಾಸವಾಗಿರುವ ಕಡೆಗಳಲ್ಲಿ ತೆರೆಯಲು ಮುಂದಾಗಿದ್ದು, ಮೊದಲ ಹಂತದಲ್ಲಿ, ತುಮಕೂರು ನಗರದಲ್ಲಿ 7 ಕ್ಲಿನಿಕ್‌ಗಳನ್ನು ತೆರೆದಿದ್ದು, ಹಾಲಿ ಇರುವ ಪಿ.ಹೆಚ್.ಸಿ.ಗಳ ವ್ಯಾಪ್ತಿ ಹೊರತು ಪಡಿಸಿ, ಅದೇ ರೀತಿ ಕಾರ್ಯ ನಿರ್ವಹಿಸುವ ಸುಮಾರು 7 ಕ್ಲಿನಿಕ್‌ಗಳನ್ನು ತೆರೆಯಲಾಗಿದೆ ಎಂದರು.
ಎಲ್ಲಾ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಜೀವ ವಿಮೆ, ನಮ್ಮ ಕ್ಲಿನಿಕ್‌ನಂತಹ ಜನಪರ ಯೋಜನೆ ಗಳನ್ನು ಹಾಕಿಕೊಂಡಿದೆ. ಇದು ಜಿಲ್ಲಾಸ್ಪತ್ರೆಯ ಮೇಲಿನ ಭಾರವನ್ನು ಕಡಿಮೆ ಮಾಡಲಿದೆ. ಪ್ರತಿ 30 ಸಾವಿರ ಕುಟುಂಬಗಳಿಗೆ ಒಂದರಂತೆ ನಮ್ಮ ಕ್ಲಿನಿಕ್ ಆರಂಭವಾಗಲಿದ್ದು, ಪ್ರಸ್ತುತ ಜಾಗ ಸಿಕ್ಕಿರುವ 4 ಉದ್ಘಾಟನೆಗೊಳ್ಳುತ್ತಿದ್ದು, ಮುಂದಿನ 15 ದಿನದಲ್ಲಿ ಉಳಿದವು ಸಹ ಆರಂಭವಾಗಲಿವೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಮಂಜುನಾಥ ಮಾತನಾಡಿ, ನಗರದಲ್ಲಿ 7 ಮತ್ತು ಜಿಲ್ಲೆಯಲ್ಲಿ 3 ಸೇರಿ 10 ನಮ್ಮ ಕ್ಲಿನಿಕ್ ಕೇಂದ್ರಗಳನ್ನು ತೆರೆಯಲಾಗುತ್ತಿದೆ.
ಜಿಲ್ಲೆಯ 10 ಕ್ಲಿನಿಕ್‌ಗಳಿಗೂ ಅಗತ್ಯವಿರುವ ಮಾನವ ಸಂಪನ್ಮೂಲ ಮತ್ತು ಔಷಧ ನೀಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4:30ವರಗೆ ಕೆಲಸ ಮಾಡಲಿದೆ ಮುಂದಿನ ದಿನಗಳಲ್ಲಿ ತಾಲೂಕಿಗೆ ಒಂದರಂತೆ ತೆರೆಯುವ ಚಿಂತನೆ ಇದೆ. ಇದರಿಂದ ಜಿಲ್ಲಾ ಸ್ಪತ್ರೆಯ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದರು.
ಮೇಯರ್ ಪ್ರಭಾವತಿ ಮಾತನಾಡಿ, ಬಡವರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ವಾಸವಾಗಿರುವ ಬಡಾವಣೆಗಳನ್ನು ಗುರುತಿಸಿ, ಅಲ್ಲಿ ಜನರಿಗೆ ಉತ್ತಮ ಆರೋಗ್ಯ ಒದಗಿಸುವ ಉದ್ದೇಶದಿಂದ ನಮ್ಮ ಕ್ಲಿನಿಕ್ ತೆರೆಯುತ್ತಿರುವುದು ಸಂತೋಷದ ವಿಚಾರವಾಗಿದೆ.ಹೆಚ್ಚು ಹೆಚ್ಚು ಬಡಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಈ ವೇಳೆ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಸದಸ್ಯ ಮನುಗೌಡ, ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷರಾದ ವೀಣಾ , ಮಾಜಿ ಪಾಲಿಕೆ ಉಪಾಧ್ಯಕ್ಷ ಹನುಮಂತರಾಯಪ್ಪ, ವೆಂಕಟೇಶ್, ಮಾಜಿ ಪಾಲಿಕೆ ಸದಸ್ಯರಾದ ಎಂ.ಪಿ.ರಮೇಶ್, ಡಾ.ರಜಿನಿ, ಆರ್.ಸಿ.ಹೆಚ್.ಡಾ.ಕೇಶವರಾಜ್, ಸಂಚಾಲಕರಾದ ಡಾ.ಮೋಹನ್‌ದಾಸ್, ಪಾಲಿಕೆಯ ಟಿ.ಹೆಚ್.ಓ ಡಾ.ಲಕ್ಷ್ಮಿಕಾಂತ್, ಡಾ.ನಾಗಭೂಷಣ್, ಮುಖಂಡರಾದ ಶರತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

