ತುಮಕೂರು: ಜಮೀನಿನಲ್ಲಿ ಕೆಲಸ ಮಾಡುವಾಗ ರೈತನ ಮೇಲೆ ಕರಡಿ ದಾಳಿ ಮಾಡಿದ(Bear Attack) ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಎಲೆಕಡಕಲು ಗ್ರಾಮದಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ರೈತ ಮೃತಪಟ್ಟಿದ್ದಾರೆ.

ರಾಜು(33) ಮೃತಪಟ್ಟ ರೈತ. ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಬುಧವಾರ ರೈತನ ಮೇಲೆ ಕರಡಿ ಏಕಾಏಕಿ ದಾಳಿ ಮಾಡಿದೆ. ರೈತನ ದೇಹದಿಂದ ಕರುಳಿನ ಭಾಗವೇ ಹೊರಕ್ಕೆ ಬರುವಷ್ಟು ಭೀಕರವಾಗಿ ಕರಡಿ ದಾಳಿ ಮಾಡಿದೆ. ಗಂಭೀರವಾಗಿ ಗಾಯಗೊಂಡ ರೈತನನ್ನು ತಕ್ಷಣ ಕುಣಿಗಲ್ ಆಸ್ಪತ್ರೆ ಚಿಕಿತ್ಸೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿಯ ಬಿ.ಜಿ.ಎಸ್.ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ರೈತ ಕೊನೆಯುಸಿರೆಳೆದಿದ್ದಾರೆ.

ರೈತನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕರಡಿ ದಾಳಿಯಿಂದ ಎಲೆಕಡಕಲು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ ಹೊಲ ಗದ್ದೆಗಳ ಕಡೆಗೆ ಹೋಗಲು ಭಯಪಡುತ್ತಿದ್ದಾರೆ. ಹುಲಿಯೂರುದುರ್ಗ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ