ತುಮಕೂರು: ಈ ಭಾಗದಲ್ಲಿ ಕಳೆದ ಕೆಲವು ಸಮಯದಿಂದ ಆತಂಕಕ್ಕೆ ಕಾರಣವಾಗಿದ್ದ ಚಿರತೆಯೊಂದು ಕೊನೆಗೂ ಬೋನಿಗೆ (Leopard trapped) ಬಿದ್ದಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ. ಒಂದು ವರ್ಷದ ಗಂಡು ಚಿರತೆ ಬೋನಿನಲ್ಲಿ ಸಿಲುಕಿದೆ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ವೀರಾಪುರ ಗ್ರಾಮದಲ್ಲಿ ನಡೆದಿದೆ. ಈ ಚಿರತೆ ಕಳೆದ ಹಲವು ಸಮಯದಿಂದ ಹಸು, ಮೇಕೆಗಳ ಮೇಲೆ ದಾಳಿ ನಡೆಸುತ್ತಿತ್ತು. ರೈತರಿಗೆ ಸಾಕಷ್ಟು ನಷ್ಟ ಉಂಟುಮಾಡಿತ್ತು.

ಚಿರತೆ ಹಾವಳಿಯಿಂದ ಬೇಸತ್ತಿದ್ದ ವೀರಾಪುರ ಸುತ್ತಮುತ್ತಲಿನ ಜನರು ಅದನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆ, ಬೋನಿನ ಒಳಗೆ ನಾಯಿಯನ್ನು ಇಟ್ಟು ಕಾದಿತ್ತು. ವೀರಾಪುರ ಗ್ರಾಮದ ರಾಮೇಗೌಡ ಎಂಬುವವರ ಜಮೀನಿನಲ್ಲಿ ಇಟ್ಟಿದ್ದ ಬೋನಿನಲ್ಲಿ ಈಗ ಚಿರತೆ ಸೆರೆಯಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳಾದ ರವಿ ಹಾಗೂ ಮುತ್ತುರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಚಿರತೆಯನ್ನು ಬನ್ನೇರುಘಟ್ಟ ವನ್ಯಧಾಮಕ್ಕೆ ಬಿಡಲು ತಯಾರಿ ಆಗುತ್ತಿದೆ