ಹೈದರಾಬಾದ್, ಡಿಸೆಂಬರ್ 15; ವಾಹನ ಪೂಜೆಗಾಗಿ ಕಾರು, ಬೈಕ್ ಮತ್ತು ಇತರ ವಾಹನಗಳನ್ನು ದೇವಾಲಯಕ್ಕೆ ತರುತ್ತಾರೆ. ಆದರೆ, ತೆಲಂಗಾಣದ ಉದ್ಯಮಿಯೊಬ್ಬರು ಹೊಸ ಹೆಲಿಕಾಪ್ಟರ್ ತಂದು ಪೂಜೆ ಮಾಡಿಸಿದ್ದಾರೆ.
ತೆಲಂಗಾಣದ ಉದ್ಯಮಿ ಬೋಯಿನಪಲ್ಲಿ ಶ್ರೀನಿವಾಸ್ ರಾವ್ ತಾವು ಖರೀದಿ ಮಾಡಿದ ಹೊಸ ಹೆಲಿಕಾಪ್ಟರ್‌ಗೆ ದೇವಾಲಯದಲ್ಲಿ ಪೂಜೆ ಮಾಡಿಸಿ ಸುದ್ದಿಯಾಗಿದ್ದಾರೆ. ಈ ಪೂಜೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹೈದರಾಬಾದ್‌ನ ಪ್ರತಿಮಾ ಗ್ರೂಪ್‌ನ ಮಾಲೀಕರಾಗಿರುವ ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಕುಟುಂಬ ಸದಸ್ಯರೊಂದಿಗೆ ದೇವಾಲಯಕ್ಕೆ ಆಗಮಿಸಿ ಏರ್‌ಬಸ್ ಎಸಿಹೆಚ್-135ಕ್ಕೆ ಪೂಜೆ ಮಾಡಿಸಿದ್ದಾರೆ.
ಸುಮಾರು 47.15 ಕೋಟಿ ರೂ. ಮೊತ್ತದ ಹೆಲಿಕಾಪ್ಟರ್‌ಗೆ ಪೂಜೆ ಮಾಡಿಸಲು ಹೈದರಾಬಾದ್‌ನಿಂದ 100 ಕಿ. ಮೀ. ದೂರದಲ್ಲಿರುವ ಯಾದಾದ್ರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದರು.
ಮೂವರು ಪುರೋಹಿತರ ಮಾರ್ಗದರ್ಶನದಲ್ಲಿ ಪೂಜೆ ಮಾಡಿಸಲಾಗಿದೆ. ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಅವರು ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ವಿದ್ಯಾಸಾಗರರಾವ್ ಅವರ ಸಂಬಂಧಿ. ಆದ್ದರಿಂದ ಹೆಲಿಕಾಪ್ಟರ್ ಪೂಜೆಯಲ್ಲಿ ಅವರು ಸಹ ಭಾಗಿಯಾಗಿದ್ದರು.
ಪ್ರತಿಮಾ ಗ್ರೂಪ್ ಕಂಪನಿಯು ಹೈದರಾಬಾದ್‌ನಲ್ಲಿ ಕೇಂದ್ರ ಕಚೇರಿ ಹೊಂದಿದೆ. ರಿಯಲ್ ಎಸ್ಟೇಟ್, ಉತ್ಪಾದನೆ, ಟೆಲಿಕಾಂ ಮಂತಾದ ಕ್ಷೇತ್ರಗಳಲ್ಲಿ ತೊಡಗಿಕೊಂಡಿದೆ. ಶಾಲೆ, ಆಸ್ಪತ್ರೆಗಳನ್ನು ಸಹ ಹೊಂದಿದೆ.
ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಕುಟುಂಬ ರಾಜಕಾರಣದಲ್ಲಿಯೂ ಸಕ್ರಿಯವಾಗಿದೆ. ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಸಹೋದರ ಬಿ. ವಿನೋದ್ ಕುಮಾರ್ ಟಿಆರ್‌ಎಸ್ ಪಕ್ಷ ಮಾಜಿ ಸಂಸದರು. ಕೆಲವು ದಿನಗಳ ಹಿಂದೆ ಇವರ ಕುಟುಂಬ ಒಡೆತನದ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದಿತ್ತು.
ಹೈದರಾಬಾದ್, ಕರೀಂನಗರದಲ್ಲಿ ಬೋಯಿನಪಲ್ಲಿ ಶ್ರೀನಿವಾಸ್ ರಾವ್ ಕುಟುಂಬ ಹಲವಾರು ಆಸ್ತಿಗಳನ್ನು ಹೊಂದಿದೆ. ಸಂಸ್ಥೆಗಳು ತೆರಿಗೆ ವಂಚನೆ ಮಾಡಿವೆ ಎಂಬ ಆರೋಪದ ಮೇಲೆ ಐಟಿ ದಾಳಿ ನಡೆಸಲಾಗಿತ್ತು

