ಜನವರಿ 8ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಬೃಹತ್ ಐಕ್ಯತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು 2023ರ ಚುನಾವಣೆಯ ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮೈಸೂರು ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ 31 ಜಿಲ್ಲೆಗಳಿಂದ 10 ಲಕ್ಷ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. 2011ರ ಜನಗಣತಿ ಅನುಸಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಶೇ. 24.1 ಜನರಿದ್ದಾರೆ. 2021ರ ಜನಗಣತಿ ಪ್ರಕಟಗೊಂಡರೆ ಅದು ಶೇ.30ಕ್ಕೆ ಏರಿಕೆಯಾಗಲಿದೆ. ಕರ್ನಾಟಕದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿರುವ ಬೃಹತ್ ಪ್ರಮಾಣದ ಜನರ ಜ್ವಲಂತ ಸಮಸ್ಯೆಗಳು ಮುಂದುವರಿದಿವೆ. ಪರಿಶಿಷ್ಟ ಜಾತಿಯ 101, ಪರಿಶಿಷ್ಟ ಪಂಗಡದ 52 ಜಾತಿಗಳು ಒಗ್ಗಟ್ಟಿನಿಂದ ತಮ್ಮ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಲು ಐಕ್ಯತಾ ಸಮಾವೇಶ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಕೇಂದ್ರ ಸರಕಾರ 14 ರಾಜ್ಯಗಳ 60 ಲಕ್ಷ ಎಸ್‌ಸಿ ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದನ್ನು ಸ್ಥಗಿತಗೊಳಿಸಿದೆ. ರಾಜ್ಯ ಸರಕಾರವೂ ಅದೇ ಮಾದರಿ ಮುಂದುವರಿಸಿದೆ. ಶೇ.3 ಜನಸಂಖ್ಯೆಗೆ ಮೀಸಲಾತಿ ಜಾರಿಗೊಳಿಸಿ ವಿದ್ಯಾರ್ಥಿ ವೇತನ ಕೊಟ್ಟಿದ್ದಾರೆ. ಶತಶತಮಾನಗಳಿಂದ ಶೋಷಣೆಯಿಂದ ಬಂದ ಜನರಿಗೆ ಸಂವಿಧಾನಾತ್ಮಕ ಹಕ್ಕು ಮೊಟಕುಗೊಳಿಸಿದ್ದಾರೆ ಎಂದು ಹೇಳಿದರು. ಕಾಲನಿಗಳನ್ನು ನಿರ್ಮೂಲನೆ ಮಾಡುವ ಬದಲಿಗೆ ಮತ್ತಷ್ಟು ಜಾತಿ ಕಾಲನಿಗಳು ಬೆಳೆಯುತ್ತಿದೆ. ಜಾತೀಯತೆ ಹೆಚ್ಚುತ್ತಿದೆ. ಬಿಜೆಪಿ ಮತ್ತೆ ಶೋಷಿತ ಜನರನ್ನು ಶೋಷಣೆಯ ಸ್ಥಳಕ್ಕೆ ತಳ್ಳುವ ಪ್ರಯತ್ನ ಮಾಡುತ್ತಿದೆ ಎಂದರು.
2018ರ ಕಾಂಗ್ರೆಸ್ ಸರ್ಕಾರ ಕೊನೆಯ ಬಜೆಟ್‌ನಲ್ಲಿ 30 ಸಾವಿರ ಕೋಟಿ ನೀಡಲಾಗಿತ್ತು. ಕಳೆದ 3 ವರ್ಷಗಳಿಂದ ಬಜೆಟ್ ಕಡಿತ ಮಾಡಲಾಗಿದೆ. ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಗಾತ್ರ 2 ಲಕ್ಷದ 62 ಸಾವಿರ ಕೋಟಿ ರೂಪಾಯಿ ಇದರಲ್ಲಿ ಶೇ. 24.1 ಅಂದರೆ 42 ಸಾವಿರ ಕೋಟಿ ರೂಪಾಯಿ ನೀಡಬೇಕಿತ್ತು. ಆದರೆ 28 ಸಾವಿರ ಕೋಟಿ ರೂಪಾಯಿ ಕಡಿಮೆ ಹಣವನ್ನು ಎಸ್‌ಸಿ, ಎಸ್‌ಟಿಗೆ ನೀಡಿದರು. ಕ್ಷೇಮಾಭಿವೃದ್ಧಿ ಯೋಜನೆಗಳು, ಕಾರ್ಯಕ್ರಮ ಸ್ಥಗಿತಗೊಂಡಿವೆ. ಅಲ್ಲದೇ 7800 ಕೋಟಿ ರೂ.ಗಳನ್ನು ಅನ್ಯ ಉದ್ದೇಶಕ್ಕೆ ಖರ್ಚು ಮಾಡಿದ್ದಾರೆ. ಈ ಅನ್ಯಾಯವನ್ನು ಪ್ರಶ್ನಿಸಿ ಸರ್ಕಾರಕ್ಕೆ ಸಮಾವೇಶದ ಮೂಲಕ ಎಚ್ಚರಿಕೆ ನೀಡಲಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್.ಧ್ರುವನಾರಾಯಣ, ಸತೀಶ್ ಜಾರಕಿಹೊಳಿ, ಕೆಪಿಸಿಸಿ ಎಸ್‌ಸಿ ವಿಭಾಗದ ಅಧ್ಯಕ್ಷ ಧರ್ಮಸೇನಾ, ಶಾಸಕರಾದ ಎಚ್.ಪಿ.ಮಂಜುನಾಥ್, ಸಿ.ಪುಟ್ಟರಂಗಶೆಟ್ಟಿ, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಆರ್.ನರೇಂದ್ರ, ಮಾಜಿ ಸಚಿವೆ ಮಲ್ಲಾಜಮ್ಮ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಮಾಜಿ ಸಂಸದ ಚಂದ್ರಪ್ಪ ಉಪಸ್ಥಿತರಿದ್ದರು.

