ರಾಮನಗರ: ಜಾತ್ಯತೀತ ಜನತಾ ದಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಡಿ.16 ರ ಶುಕ್ರವಾರ (ಇಂದು) ಬಿಡುಗಡೆ ಮಾಡುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ನಡೆಯಲಿರುವ ಪಂಚ ರತ್ನ ಯಾತ್ರೆಗೆ ನಿನ್ನೆ ಸಂಜೆ ಮಾಗಡಿಯಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಮ್ಮ ಪಾರ್ಟಿ ಮುಂದಿನ ಚುನಾವಣೆಯಲ್ಲಿ ಸ್ವಂತವಾಗಿ ಅಧಿಕಾರಕ್ಕೆ ಬರಬೇಕು ಎನ್ನುವ ಉದ್ದೇಶದಿಂದ ಪಕ್ಷದ ಸ್ಪಷ್ಟ ಗುರಿಯನ್ನು ಜನತೆಗೆ ತಿಳಿಸುವ ಸಲುವಾಗಿ ಪಂಚ ರತ್ನ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆ ಈಗಾಗಲೇ ಸಾಗಿ ಬಂದಿರುವ ಕ್ಷೇತ್ರಗಳಲ್ಲಿ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ ಎಂದರು.
ರಾಮನಗರ ಜಿಲ್ಲೆಯಲ್ಲಿ ಗುರವಾರದಿಂದ ಮುಂದಿನ ನಾಲ್ಕು ದಿನಗಳ ಕಾಲ ಯಾತ್ರೆ ಸಂಚಾರ ಮಾಡಲಿದ್ದು, ನಂತರ ಮಂಡ್ಯಯಲ್ಲಿ ಸಾಗಿ ಜ.3 ರಿಂದ ಬೀದರ್ ಜಿಲ್ಲೆಯಲ್ಲಿ ನಡೆಯಲಿದೆ. ಅಲ್ಲದೇ, ಮುಂದಿನ ಮಾರ್ಚ್ 20ರ ವರೆಗೆ ರಾಜ್ಯದ 120 ಕ್ಷೇತ್ರಗಳಲ್ಲಿ ಪಂಚ ರತ್ನ ಯಾತ್ರೆಯ ಮೂಲಕ ಪಕ್ಷ ಸಂಘಟನೆ ಮಾಡಲಾಗುವುದು. ಕ್ಷೇತ್ರದ ಅಭ್ಯರ್ಥಿಗಳು ಯಾರು ಎನ್ನುವ ವಿಚಾರದ ಬಗ್ಗೆ ಎಲ್ಲರಿಗೂ ಸಹಜವಾಗಿಯೇ ಕುತೂಹಲವಿದೆ. ಇದಕ್ಕೆ ಶುಕ್ರವಾರ ಮೊದಲ ಹಂತದಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

