Elephant Attack in Kerala: ಕೇರಳದಲ್ಲಿ ದೇವಸ್ಥಾನದ ಆನೆಯೊಂದು ಮಾವುತನನ್ನು ತುಳಿದು ಸಾಯಿಸಿರುವ ಆಘಾತಕಾರಿ ಘಟನೆ ನಡೆದಿದೆ. ಈ ಭಯಾನಕ ದೃಶ್ಯವು ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಕೇರಳದ ಟಿವಿ ಪುರಂ ಶ್ರೀರಾಮ ಸ್ವಾಮಿ ದೇವಸ್ಥಾನದ ಕಾರ್ಯಕ್ರಮದ ವೇಳೆ ಈ ದುರ್ಘಟನೆ ನಡೆದಿದೆ. ಪುತ್ತುಪ್ಪಲ್ಲಿ ಮೂಲದ ಅರವಿಂದ್ ಎಂಬ 26 ವರ್ಷದ ಮಾವುತ ಆನೆಯ ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಏಪ್ರಿಲ್‌ ೩ರ ಬುಧವಾರ ರಾತ್ರಿ 9 ಗಂಟೆ ವೇಳೆಗೆ ಈ ಘಟನೆ ನಡೆದಿದೆ.

ಕುಂಜುಲಕ್ಷ್ಮಿ ಹೆಸರಿನ ಆನೆಯನ್ನು ದೇವಾಲಯದ ಸಮಾರಂಭಕ್ಕೆಂದು ಅಲಂಕಾರಗೊಳಿಸಲಾಗಿತ್ತು. ಶಾಂತವಾಗಿಯೇ ಇದ್ದ ಆನೆ ಇದ್ದಕ್ಕಿದ್ದಂತೆ ಮದವೇರಿದಂತೆ ವರ್ತಿಸಿ ಆ ಕಡೆ ಈ ಕಡೆ ಓಡಾಡಿದೆ. ಆನೆಯ ಪಾದಗಳ ಸಮೀಪದಲ್ಲಿದ್ದ ಮಾವುತ ಅರವಿಂದನನ್ನು ಕಾಲಿನಲ್ಲಿ ತುಳಿದು ಹಾಕಿದೆ. ಕೂಡಲೇ ಆತನ ರಕ್ಷಿಸಲು ದೇವಸ್ಥಾನದಲ್ಲಿದ್ದ ಜನರು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.