ನವದೆಹಲಿ: ದೇಶದ ಇತಿಹಾಸದಲ್ಲೇ ಪ್ರಸ್ತುತ ನಡೆಯುತ್ತಿರುವ 18ನೇ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ
ಬರೋಬ್ಬರಿ 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಅತಿಹೆಚ್ಚು ನಗದು, ಮದ್ಯ, ಮಾದಕವಸ್ತುಗಳು, ಚಿನ್ನಾಭರಣಗಳು, ಉಚಿತ ಉಡುಗೊರೆಗಳು ಸೇರಿದಂತೆ ಬರೋಬ್ಬರಿ 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಈವರೆಗೂ ನಡೆದಿರುವ 17 ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣ ಕಾರ್ಯಾಚರಣೆ ಆಗಿದೆ.

ಈ ಕುರಿತು ಭಾರತ ಚುನಾವಣಾ ಆಯೋಗ ಮಾಹಿತಿ ನೀಡಿದ್ದು, ಮಾ.1ರಿಂದ ಏ.13ರವರೆಗೆ ದೇಶದ ವಿವಿಧ ಭಾಗಗಳಲ್ಲಿ 395.39 ಕೋಟಿ ನಗದು, 489.31 ಕೋಟಿ ರೂ. ಮೌಲ್ಯದ ಮದ್ಯ, 2068.85 ಕೋಟಿ ಡ್ರಗ್ಸ್, 562.10 ಕೋಟಿ ಮೌಲ್ಯದ ಬೆಲೆಬಾಳುವ ವಸ್ತುಗಳು ಹಾಗೂ 1042.49 ಕೋಟಿ ಮೌಲ್ಯದ ಉಚಿತ ಉಡುಗೊರೆ ಸೇರಿದಂತೆ ಒಟ್ಟು 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ಚುನಾವಣಾ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.

ಅದರಲ್ಲೂ, 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮೊದಲ ಹಂತದ ಮತದಾನ ನಡೆಯುವ ಮೊದಲೇ ಜಪ್ತಿಯಾದ ಹಣ, ವಸ್ತುಗಳ ಮೌಲ್ಯ ಶೇ.45ರಷ್ಟು ಏರಿಕೆಯಾಗಿದೆ.

ಆದಾಯ ತೆರಿಗೆ, ರಾಜ್ಯ ಪೊಲೀಸ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಸ್‌ಎಲ್ಬಿಸಿ, ಎಎಐ, ಬಿಸಿಎಎಸ್, ಜಾರಿ ನಿರ್ದೇಶನಾಲಯ, ಸಿಐಎಸ್‌ಎಫ್ ಸೇರಿದಂತೆ ಮತ್ತಿತರ ಸಂಸ್ಥೆಗಳು ನಗದು ಮತ್ತು ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿವೆ.

ಇನ್ನೊಂದೆಡೆ, ಪ್ರಧಾನಿ ನರೇಂದ್ರಮೋದಿ ಅವರ ತವರು ಜಿಲ್ಲೆ ಗುಜರಾತ್ ನಲ್ಲಿ ಚುನಾವಣಾ ಆಯೋಗ 605,33,55,170 ನಗದು, ಮಾದಕವಸ್ತುಗಳೂ, ಮದ್ಯ, ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ, ರಾಜಸ್ಥಾನ ರಾಜ್ಯವೊಂದರಲ್ಲೇ ಈವರೆಗೂ 778, 52,65,100 ರೂ. ಮೌಲ್ಯದ ಅತಿ ಹೆಚ್ಚು ನಗದು, ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಾಗಿದೆ.

ಹಾಗೇ, ತಮಿಳುನಾಡು- 460,84,94,280 ರೂ. ಮಹಾರಾಷ್ಟ್ರ- 431,34,77,720 ರೂ. ಪಂಜಾಬ್-311,84,49,060 ರೂ. ಕರ್ನಾಟಕ 281,43,28,440 ಹಾಗೂ ನವದೆಹಲಿಯಲ್ಲಿ 236,06,96,950 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 36 ರಾಜ್ಯಗಳಲ್ಲಿ ಆಯೋಗವು 446,58,16,74,510 ರೂ. ಮೊತ್ತದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಲವು ಕಡೆ ಕರ್ತವ್ಯ ನಿರ್ಲಕ್ಷ್ಯ ಆರೋಪದ ಹಿನ್ನಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಚುನಾವಣಾ ಆಯೋಗ ದೃಢಪಡಿಸಿದೆ.