ಸುರತ್ಕಲ್: ದಸರಾ ಹಬ್ಬದ ಸಂಭ್ರಮದ ನಡುವೆ, ಸುರತ್ಕಲ್ ನ ಯುವಕರ ತಂಡವೊಂದು ತಮ್ಮ ವಿಶಿಷ್ಟ ‘ಬಣ್ಣದ ವೇಷ’ ಪ್ರಯೋಗದ ಮೂಲಕ ಮಾನವೀಯತೆಯ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ‘ಟೀಮ್ ತುಳುವ ತುಡರ್’ ಎಂಬ ಹೆಸರಿನ ಈ ತಂಡವು, ಬಣ್ಣದ ವೇಷ ಧರಿಸಿ ಮನರಂಜನೆಯ ಜೊತೆಗೆ ಮೂರನೇ ವರ್ಷಕ್ಕೆ ಸತತವಾಗಿ ಸಾಮಾಜಿಕ ಕಾರ್ಯಕ್ಕೆ ಹಣ ಸಂಗ್ರಹಿಸುವ ಮೂಲಕ ಇತರರಿಗೆ ಮಾದರಿಯಾಗಿದೆ.


ತಂಡವು ಈ ಬಾರಿ ಸಂಗ್ರಹಿಸಿದ ಹಣವನ್ನು ಬೆಳ್ತಂಗಡಿ ತಾಲೂಕಿನ ಕುಕ್ಕಳ ಗ್ರಾಮದ ಕೆಂಪರಿಗೆ ನಿವಾಸಿ ಶ್ರೀನಿವಾಸ್ ಅವರಿಗೆ ನೀಡಿದೆ. ಕಳೆದ ಒಂಬತ್ತು ವರ್ಷಗಳಿಂದ ವೆರಿಕೊಸ್ (Varicose Veins) ಕಾಯಿಲೆಯಿಂದ ಬಳಲುತ್ತಿರುವ ಶ್ರೀನಿವಾಸ್ ಅವರ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಈ ಯುವಕರ ತಂಡ ಮುಂದಾಗಿದೆ.


ದಸರಾ ಹಬ್ಬದ ದಿನದಂದು ಬಣ್ಣದ ವೇಷ ಧರಿಸಿ, ನೋಡುಗರನ್ನು ರಂಜಿಸಿ ಸಂಗ್ರಹಿಸಿದ ಒಟ್ಟು ಮೊತ್ತ ₹28,125 ಅನ್ನು ಶ್ರೀನಿವಾಸ್ ಅವರ ಚಿಕಿತ್ಸೆಗೆ ಹಸ್ತಾಂತರಿಸಲಾಗಿದೆ. ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಶೆಟ್ಟಿ ಅವರು ಉಪಸ್ಥಿತರಿದ್ದರು.

ಟೀಮ್ ತುಳುವ ತುಡರ್‌ನ ಸದಸ್ಯರು:
ಮನೀಶ್ ಡಿ ಶೆಟ್ಟಿ, ಶರಣ್, ರಾಜು, ಬಸವರಾಜ್, ಸುದೀಪ್, ಬನ್ವಾಸ್, ಧನ್ವಿನ್, ಅಶ್ರಿತ್, ಅಶ್ವಿತ್ ಮತ್ತು ರಜತ್ ಅವರು ಈ ಮಾನವೀಯ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.


ತಂಡದ ಸದಸ್ಯರು ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, “ಬಣ್ಣ ಬಣ್ಣದ ವೇಷಭೂಷಣಗಳನ್ನು ಧರಿಸಿ, ಜನರನ್ನು ಮನರಂಜಿಸುತ್ತಾ ಕಷ್ಟಗಳಿಗೆ ಸ್ಪಂದಿಸುವುದು ನಮಗೆ ಸದಾ ತೃಪ್ತಿ ನೀಡುತ್ತದೆ. ಇದನ್ನೇ ನಾವು ದೇವರ ಸೇವೆ ಎಂದು ಭಾವಿಸಿದ್ದೇವೆ” ಎಂದರು. “ಬಡ ಕುಟುಂಬಕ್ಕೆ ಸ್ಪಂದಿಸುವ ಮೂಲಕ ಅನೇಕ ಆನಾರೋಗ್ಯ ಪೀಡಿತರಿಗೆ ನೆರವಾಗಿರುವುದು ನಮಗೆ ಹೆಮ್ಮೆ ತಂದಿದೆ. ಈ ಸೇವಾ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲಾ ಸಹೃದಯ ದಾನಿಗಳಿಗೆ ನಮ್ಮ ತಂಡ ಧನ್ಯವಾದ ಹೇಳುತ್ತದೆ. ಪರಸ್ಪರ ಕಷ್ಟಗಳಿಗೆ ಸ್ಪಂದಿಸುವುದೇ ಮಾನವತಾ ಧರ್ಮ” ಎಂದು ತಂಡದ ಯುವಕರು ಹೇಳಿದರು.


ಟೀಮ್ ತುಳುವ ತುಡರ್‌ನ ಈ ಕಾರ್ಯವು, ಕೇವಲ ಹಬ್ಬದ ಆಚರಣೆಗೆ ಸೀಮಿತವಾಗದೆ, ಅದನ್ನು ನೊಂದವರ ಕಣ್ಣೀರೊರೆಸುವ ಒಂದು ಸಾಧನವಾಗಿ ಪರಿವರ್ತಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Leave a comment