ರಾಮನಗರ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (KSPCB) ಅಗತ್ಯ ಅನುಮತಿ ಪಡೆಯದ ಕಾರಣದಿಂದಾಗಿ, ಬಿಡದಿ ಕೈಗಾರಿಕಾ ಪ್ರದೇಶದ ಜಾಲಿವುಡ್ ಸ್ಟುಡಿಯೋಸ್‌ಗೆ ರಾಮನಗರ ಜಿಲ್ಲಾಡಳಿತವು ಅಧಿಕೃತವಾಗಿ ಬೀಗ ಜಡಿದಿದ್ದು, ಇದರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ಸ್ಥಗಿತಗೊಂಡಿದೆ. ಲಕಲಕ ಎನ್ನುತ್ತಿದ್ದ ಬಿಗ್ ಬಾಸ್ ಮನೆ ಕ್ಷಣಾರ್ಧದಲ್ಲಿ ಬಿಕೋ ಎನ್ನುತ್ತಿದ್ದು, ಕಾರ್ಯಕ್ರಮದ ಭವಿಷ್ಯ ಸಂಪೂರ್ಣ ಅತಂತ್ರವಾಗಿದೆ.
ತಹಶೀಲ್ದಾರ್ ಸಮ್ಮುಖದಲ್ಲಿ ಬೀಗಮುದ್ರೆ
ಪರಿಸರ ನಿಯಮಗಳ ಉಲ್ಲಂಘನೆ ಮತ್ತು ತ್ಯಾಜ್ಯ ವಿಲೇವಾರಿ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿತ್ತು. ಮಂಗಳವಾರ (ಅ. 7, 2025) ರಾಮನಗರ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದ ಅಧಿಕಾರಿಗಳ ತಂಡ, ಪೊಲೀಸರ ಸಹಕಾರದೊಂದಿಗೆ ಸ್ಟುಡಿಯೋಗೆ ಬೀಗ ಜಡಿದು ಅದನ್ನು ತಮ್ಮ ವಶಕ್ಕೆ ಪಡೆದುಕೊಂಡಿದೆ.
ಸ್ಪರ್ಧಿಗಳನ್ನು ಪಕ್ಕದ ಸ್ಟುಡಿಯೋಗೆ ಸ್ಥಳಾಂತರಿಸಿದ ಸಿಬ್ಬಂದಿ
ಸ್ಟುಡಿಯೋಗೆ ಬೀಗ ಹಾಕುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ, ಬಿಗ್ ಬಾಸ್ ಮನೆಯೊಳಗಿದ್ದ ಸ್ಪರ್ಧಿಗಳನ್ನು ತಕ್ಷಣವೇ ಅಲ್ಲಿಂದ ಹೊರ ಕರೆಸಲಾಗಿದೆ. ವರದಿಯ ಪ್ರಕಾರ, ಎಲ್ಲ ಸ್ಪರ್ಧಿಗಳನ್ನು ಸದ್ಯಕ್ಕೆ ಅದೇ ಆವರಣದಲ್ಲಿರುವ ಪಕ್ಕದ ಮತ್ತೊಂದು ಸ್ಟುಡಿಯೋ ಕೊಠಡಿಯಲ್ಲಿ ಕುಳ್ಳರಿಸಲಾಗಿದೆ. ಈ ದಿಢೀರ್ ಬೆಳವಣಿಗೆಯಿಂದಾಗಿ ಸ್ಪರ್ಧಿಗಳು ಮತ್ತು ನೂರಾರು ತಂತ್ರಜ್ಞರಲ್ಲಿ ಗೊಂದಲ ಮೂಡಿದೆ.
ಕಾನೂನು ಉಲ್ಲಂಘನೆಯ ಕಾರಣದಿಂದಾಗಿ ಜನಪ್ರಿಯ ರಿಯಾಲಿಟಿ ಶೋ ಅರ್ಧಕ್ಕೆ ನಿಂತಿರುವುದು ಕನ್ನಡ ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲು. ಈ ಬಗ್ಗೆ ಕಾರ್ಯಕ್ರಮದ ಪ್ರಸಾರಕ ವಾಹಿನಿ ‘ಕಲರ್ಸ್ ಕನ್ನಡ’ದಿಂದ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಸ್ಟುಡಿಯೋ ಆಡಳಿತ ಮಂಡಳಿ ಅನುಮತಿಗಳನ್ನು ಪಡೆದು ಸ್ಟುಡಿಯೋ ಮರಳಿ ತೆರೆಯುತ್ತಾರೆಯೇ ಅಥವಾ ಬಿಗ್ ಬಾಸ್ ಕನ್ನಡ 12 ಸೀಸನ್ ಅನಿವಾರ್ಯವಾಗಿ ಕೊನೆಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಈ ಅನಿರೀಕ್ಷಿತ ಸ್ಥಗಿತದ ಬಗ್ಗೆ ನಿಮ್ಮ ಪ್ರತಿಕ್ರಿಯೆಗಳೇನು? ಈ ವಿವಾದ ಶೋ ಮೇಲೆ ಎಂತಹ ಪರಿಣಾಮ ಬೀರಬಹುದು?

Leave a comment