ಬೆಂಗಳೂರು (ಅಕ್ಟೋಬರ್ 07): ಕರ್ನಾಟಕದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (Caste Survey) ಅಂದರೆ ಜಾತಿಗಣತಿ ಕಾರ್ಯ ಪೂರ್ಣಗೊಳಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯ ಶಿಕ್ಷಕರ ಸಂಘದ ಮನವಿ ಪುರಸ್ಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ದಸರಾ ರಜೆಯನ್ನು ವಿಸ್ತರಿಸಿ ಘೋಷಣೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು (Karnataka Education Department) ಅಧಿಕೃತ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ, ರಾಜ್ಯದ ಶಾಲೆಗಳಿಗೆ ಅಕ್ಟೋಬರ್ 18, 2025 ರವರೆಗೆ ದಸರಾ ರಜೆ ವಿಸ್ತರಣೆ ಮಾಡಲಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ಆದೇಶ ಹೀಗಿದೆ
ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ಸುರಲ್ಕರ್ ವಿಕಾಸ್ ಕಿಶೋರ್ ಅವರು ಹೊರಡಿಸಿರುವ ಆದೇಶದಲ್ಲಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷಾ ಕಾರ್ಯದ ಹಿನ್ನೆಲೆಯಲ್ಲಿ ಈ ವಿಸ್ತರಣೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಧಿಕೃತ ಆದೇಶದಲ್ಲಿ ಉಲ್ಲೇಖಿಸಲಾದ ಪ್ರಮುಖಾಂಶಗಳು (School Holiday Official Order):
- ದಸರಾ ರಜೆ ವಿಸ್ತರಣೆ: ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸಮೀಕ್ಷೆ ಕಾರ್ಯವನ್ನು ಶಿಕ್ಷಕರು ಪೂರ್ಣಗೊಳಿಸಲು ಅನುಕೂಲವಾಗುವಂತೆ, ರಾಜ್ಯ ಪಠ್ಯಕ್ರಮದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ದಸರಾ ರಜೆಯನ್ನು ದಿನಾಂಕ: ಅಕ್ಟೋಬರ್ 18, 2025ರ ವರೆಗೆ ವಿಸ್ತರಿಸಲಾಗಿದೆ.
- ಸಮೀಕ್ಷೆ ಪೂರ್ಣಗೊಳಿಸಲು ಅಂತಿಮ ದಿನಾಂಕ: ಸಮೀಕ್ಷೆ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಶಿಕ್ಷಕರು ದಿನಾಂಕ ಅಕ್ಟೋಬರ್ 19, 2025ರೊಳಗೆ ತಮ್ಮ ಕಾರ್ಯವನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು.
- ಪರಿಹಾರ ತರಗತಿಗಳು (Special Classes): ರಜೆ ವಿಸ್ತರಣೆಯಿಂದ ಮಕ್ಕಳ ಕಲಿಕೆಗೆ ಉಂಟಾಗುವ ಕೊರತೆಯನ್ನು ನೀಗಿಸಲು, ರಜಾ ದಿನಗಳ ನಂತರ ವಿಶೇಷ ಬೋಧನಾ ಅವಧಿಗಳು ಅಥವಾ ವಿಶೇಷ ತರಗತಿಗಳನ್ನು ನಡೆಸಿ ಸರಿದೂಗಿಸಬೇಕು.
- ಪಿಯುಸಿ ಉಪನ್ಯಾಸಕರಿಗೆ ವಿನಾಯಿತಿ: ದ್ವಿತೀಯ ಪಿಯುಸಿ ಮಧ್ಯಾವಧಿ ಪರೀಕ್ಷೆಗಳು (2nd PUC Midterm Exam) ದಿನಾಂಕ ಅಕ್ಟೋಬರ್ 12, 2025 ರಿಂದ ನಡೆಯಲಿರುವ ಕಾರಣ, ಪರೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಉಪನ್ಯಾಸಕರನ್ನು ಸಮೀಕ್ಷಾ ಕಾರ್ಯದಿಂದ ಬಿಡುಗಡೆ ಮಾಡಲು ಸೂಚಿಸಲಾಗಿದೆ.
ಈ ಎಲ್ಲ ಅಂಶಗಳ ಅನ್ವಯ ರಾಜ್ಯದ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಕಾರ್ಯನಿರ್ವಹಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.


Leave a comment